ಯೇ ಕುರ್ವಂತಿ ಶುಭಂ ಕರ್ಮ, ಚಿಂತಯಂತಿ ಸದಾ ಶುಭಂ | ತೇಷಾಂ ಸದಾ ಮಂಗಲಂ ಭೂಯಾತ್, ಋದ್ಧಿ-ಸಿದ್ಧಿ ಚ ಸರ್ವದಾ | ಯಾರು ಸದಾಕಾಲವೂ ಒಳ್ಳೆಯ ಚಿಂತನೆಯಲ್ಲಿರುತ್ತಾರೋ, ಒಳ್ಳೆಯದನ್ನೇ ಮಾಡುತ್ತಾರೋ ಅಂತವರಿಗೆ ಯಾವಾಗಲೂ ಸಹ ಮಂಗಲವನ್ನುಂಟುಮಾಡಲಿ, ಸಂಪದ್ಸಮೃದ್ಧಿ ಬೆಳೆಯಲಿ, ಸುಖಶಾಂತಿ ಲಭಿಸಲಿ.

ವಲೀಭಿರ್ಮುಖಮಾಕ್ರಾಂತಂ ಪಲಿತೈರಂಕಿತಂ ಶಿರಃ | ಗಾತ್ರಾಣಿ ಶಿಥಿಲಾಯಂತೇ ತೃಷ್ಣೈಕಾ ತರುಣಾಯತೇ ||     ವೈರಾಗ್ಯಶತಕ- ೧೪ ಮುಖವು ಸುಕ್ಕುಗಳಿಂದ ತುಂಬಿದೆ. ತಲೆಯು ನೆರೆದ ಕೂದಲಿಂದ ಕೂಡಿದೆ. ಶರೀರದ ಎಲ್ಲಾ ಅವಯವಗಳು ಶಿಥಿಲವಾಗಿವೆ. ಆದರೆ,  ಆಸೆಯೊಂದೇ ಯೌವನದಿಂದ ಕೂಡಿದೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ

ವ್ಯಸನಸ್ಯ ಚ ಮೃತ್ಯೋಶ್ಚ ವ್ಯಸನಂ ಕಷ್ಟಮುಚ್ಯತೇ| ವ್ಯಸನ್ಯಧೋsಧೋ ವ್ರಜತಿ ಸ್ವರ್ಯಾತ್ಯವ್ಯಸನೀ ಮೃತಃ|| -ಮನುಸ್ಮೃತಿ, ೭-೫೩ ದುಶ್ಚಟ(ಕೆಟ್ಟ ಅಭ್ಯಾಸ) ಮತ್ತು ಸಾವು ಇವುಗಳಲ್ಲಿ ವ್ಯಸನವೇ ಹೆಚ್ಚು ಅಪಾಯಕಾರಿ. ದುರಭ್ಯಾಸವಿಲ್ಲದವನು ಸತ್ತು ಸ್ವರ್ಗ ಸೇರಿದರೆ, ವ್ಯಸನಿಯು ದಿನೇ ದಿನೇ ಅಧಃಪತನ ಹೊಂದುತ್ತಾನೆ {ಕೆಳಗೆ ಹೋಗುತ್ತಾನೆ}

ಸ್ತ್ರಿಯೋ ನರಪತಿರ್ವಹ್ನಿಃ ವಿಷಂ ಯುಕ್ತ್ಯಾ ನಿಷೇವಿತಂ| ಸ್ವಾರ್ಥಾಯ ಯದಿ ವಾ ದುಃಖ  ಸಂಭಾರಾಯೈವ ಕೇವಲಮ್ ||  – ಲೋಚನ-೩ ಸ್ತ್ರೀಯರು, ರಾಜ, ಬೆಂಕಿ, ವಿಷ ಇವನ್ನು ಯುಕ್ತಾಯುಕ್ತತೆ ನೋಡಿ ಸೇವಿಸಿದರೆ ಇಷ್ಟವು ಸಿದ್ಧಿಸುತ್ತದೆ. ಇಲ್ಲದಿದ್ದಲ್ಲಿ ಕೇವಲ ದುಃಖಕ್ಕೆ ಕಾರಣವಾಗುತ್ತದೆ. (ಸಂಗ್ರಹ- ಶ್ರೀಸ್ವರ್ಣವಲ್ಲೀ

ಗುರುಂ ಪ್ರಯೋಜನೋದ್ದೇಶಾತ್ ಅರ್ಚಯಂತಿ ನ ಭಕ್ತಿತಃ | ದುಗ್ಧದಾತ್ರೀತಿ ಗೌರ್ಗೇಹೇ ಪೋಷ್ಯತೇ ನ ತು ಧರ್ಮತಃ || -ದೃಷ್ಟಾಂತಕಲಿಕಾ-೯೩ ಪ್ರಯೋಜನವಿದೆಯೆಂದು ಗುರುವನ್ನು ಪೂಜಿಸುತ್ತಾರೆ, ನಿಜವಾದ ಭಕ್ತಿಯಿಂದಲ್ಲ. ಹಾಲುಕೊಡುತ್ತದೆಯೆಂದು ಮನೆಯಲ್ಲಿ ಹಸುವನ್ನು ಸಾಕುತ್ತಾರೆ, ಧರ್ಮಾಪೇಕ್ಷೆಯಿಂದಲ್ಲ. (ಸಂಗ್ರಹ: ಶ್ರೀವ್ಯಾಸ ಪ್ರತಿಷ್ಠಾನ ಬೆಂಗಳೂರು)

ಉಪಾನಹೌ ಚ ವಾಸಶ್ಚ ಧೃತಮನ್ಯೈರ್ನ ಧಾರಯೇತ್ | ಉಪವೀತಮಲಂಕಾರಂ ಸ್ರಜಂ ಕರಮೇವ ಚ ||  -ಮನುಸ್ಮೃತಿ, ೪-೬೬ ಬೇರೆಯವರು ಉಪಯೋಗಿಸಿದ ಚಪ್ಪಲಿ, ಬಟ್ಟೆ, ಜನಿವಾರ, ಅಲಂಕಾರ, ಹೂಮಾಲೆ, ಕಮಂಡಲು ಇವುಗಳನ್ನು ಉಪಯೋಗಿಸಬಾರದು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಲುಬ್ಧಮರ್ಥೇನ ಗೃಹ್ಣೀಯಾತ್ ಸ್ತಭ್ದಮಂಜಲಿಕರ್ಮಣಾ | ಮೂರ್ಖಂ ಛಂದಾನುವೃತ್ತೇನ  ಯಾಥಾತಥ್ಯೇನ ಪಂಡಿತಮ್ || ಹಿತೋಪದೇಶ, ಸಂಧಿ-೧೦೭ ಹಣದಿಂದ ಹಣದಾಸೆಯಿರುವವನನ್ನು ವಶಪಡಿಸಿಕೊಳ್ಳಬೇಕು. ಗರ್ವಿಷ್ಠನನ್ನು ಕೈಮುಗಿದು ಸಾಧಿಸಬೇಕು. ಮೂರ್ಖನನ್ನು ಅವನ ಮನಸ್ಸನ್ನನುಸರಿಸಿಯೇ ಸಾಧಿಸಬೇಕು. ಸತ್ಯದಿಂದ ಪಂಡಿತನನ್ನು ಒಲಿಸಿಕೊಳ್ಳಬೇಕು. (ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ)

ಪ್ರಿಯಂ ಬ್ರೂಯಾದಕೃಪಣಃ ಶೂರಃ ಸ್ಯಾದವಿಕತ್ಥನಃ | ದಾತಾ ನಾಪಾತ್ರವರ್ಷೀ ಸ್ಯಾತ್ ಪ್ರಗಲ್ಭ ಸ್ಯಾದನಿಷ್ಠುರಃ || -ಹಿತೋಪದೇಶ,ವಿಗ್ರಹ-೧೦೦ ದೀನನಲ್ಲದವನು ಪ್ರಿಯವನ್ನು ಮಾತಾಡಬೇಕು; ಶೂರನು ಬಡಾಯಿ ಕೊಚ್ಚಿಕೊಳ್ಳಬಾರದು; ದಾನಿಯು ಅಯೋಗ್ಯ(ಅಪಾತ್ರ)ರಿಗೆ ದಾನಮಾಡಬಾರದು; ಪಂಡಿತನು ನಿಷ್ಠುರನಾಗಿರಬಾರದು. (ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ)

ಪ್ರಾಜ್ಞೋಪಿ ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ | ಗುಣವದ್ವಾಕ್ಯಮಾದತ್ತೇ ಹಂಸಕ್ಷೀರಮಿವಾಂಭಸಃ || -ಸುಭಾಷಿತಸುಧಾನಿಧಿ ಪ್ರಾಜ್ಞನಾದವನು ವಾಚಾಳಿ ಮನುಷ್ಯರ ಒಳ್ಳೆಯ ಹಾಗೂ ಕೆಟ್ಟ ಮಾತುಗಳನ್ನೆಲ್ಲಾ ಕೇಳಿ, ಅವುಗಳಲ್ಲಿ ಗುಣವುಳ್ಳ ಮಾತುಗಳನ್ನು ಮಾತ್ರ ಹಂಸವು ನೀರಿನಿಂದ ಹಾಲನ್ನು ಹೇಗೋ ಹಾಗೆ , ಆರಿಸಿಕೊಳ್ಳುತ್ತಾನೆ.

ಯಥಾ ದೃಷ್ಟಿಃ ಶರೀರಸ್ಯ ನಿತ್ಯಮೇವ ಪ್ರವರ್ತತೇ | ತಥಾ ನರೇಂದ್ರೋ ರಾಷ್ಟ್ರಸ್ಯ ಪ್ರಭವಃ ಸತ್ಯಧರ್ಮಯೋಃ ||  ರಾಮಾಯಣ, ಅಯೋಧ್ಯಾ,-೬೭-೩೩ ದೇಹಕ್ಕೆ ಕಣ್ಣಿರುವಂತೆ ರಾಜನು ರಾಷ್ಟ್ರದ ಕಣ್ಣಾಗಿ ಹಿತಾಹಿತಗಳನ್ನು ನೋಡಿಕೊಳ್ಳುತ್ತಾನೆ. ಸತ್ಯಧರ್ಮಗಳಿಗೆ ಅವನು ಮೂಲಕಾರಣ. (ಸಂಗ್ರಹ: ಶ್ರೀವ್ಯಾಸ ಪ್ರತಿಷ್ಠಾನ ಬೆಂಗಳೂರು)